ದೇಶಿಕಾಚಾರ್, ಹೆಮ್ಮಿಗೆ
1902-1966. ಕನ್ನಡದಲ್ಲೂ ಸಂಸ್ಕøತದಲ್ಲೂ  ನುರಿತ ಪಂಡಿತರು. ಜನನ ಟಿ. ನರಸೀಪುರ ತಾಲ್ಲೂಕು ಜೋಡಿ ಹೆಮ್ಮಿಗೆ ಅಗ್ರಹಾರದಲ್ಲಿ, ವಿಜಯದಶಮಿಯಂದು. ತಂದೆ ಪಂಡಿತ ವೇದಾಂತ ಕೃಷ್ಣಮಾಚಾರ್. ತಾಯಿ ಕಲ್ಯಾಣಮ್ಮ, ಇಬ್ಬರು ಅಣ್ಣಂದಿರು, ಒಬ್ಬಾಕೆ ಅಕ್ಕ. ಹೆಂಡತಿ ಚೊಕ್ಕಮ್ಮನವರು.  ನಾಲ್ವರು ಗಂಡು ಮಕ್ಕಳು. ವಿಧ್ಯಾಭ್ಯಾಸ  ತಲಕಾಡು ಮೈಸೂರುಗಳಲ್ಲಿ. ಇಂಗ್ಲಿಷ್ ಮಾಧ್ಯಮದಲ್ಲಿ ಎನ್‍ಟ್ರೆನ್ಸ್ ಪರೀಕ್ಷೆ ಮತ್ತು ಪಂಡಿತ ಪರೀಕ್ಷೆಯಲ್ಲಿ ಮೊದಲನೆಯ ವರ್ಗದಲ್ಲಿ (1932) ತೇರ್ಗಡೆ. ಕುದೇರು, ತಲಕಾಡು, ಅಕ್ಕಿಹೆಬ್ಬಾಳ ಇವುಗಳ ಮಿಡ್ಲ್‍ಸ್ಕೂಲ್‍ನಲ್ಲಿ ಇಂಗ್ಲಿಷ್ ಉಪಾಧ್ಯಾಯರಾಗಿ ಕೋಲಾರದ ಹೈಸ್ಕೂಲಿನಲ್ಲಿ  ಕನ್ನಡ ಪಂಡಿತರಾಗಿ ಕೆಲವು ವರ್ಷಗಳಿದ್ದು, ಕೊನೆಗೆ ಅಲ್ಲಿಂದ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡಿದ್ದ ಕನ್ನಡ-ಕನ್ನಡ ಶಬ್ದಕೋಶಕ್ಕೆ ಪಂಡಿತರಾಗಿ ಆಯ್ಕೆಯಾಗಿ  ಬಂದು ತಾವು ನಿಧನಹೊಂದುವವರೆಗೂ (10-12-1966) ಸೀನಿಯರ್ ಪಂಡಿತ್ ಆಗಿ ಡೆಪ್ಯೂಟಿ ಎಡಿಟರ್ ಆಗಿ ಕೆಲಸ ಮಾಡಿದರು.

ದೇಶಿಕಾಚಾರ್ಯರು ಕನ್ನಡದಲ್ಲಿ ಉದ್ಧಾಮ  ಪಂಡಿತರು. ಇವರು ಓದಿರದ ಹಳಗನ್ನಡ ಗ್ರಂಥಗಳು ಪ್ರಾಯಶಃ ಇಲ್ಲ.  ಕನ್ನಡ ಶಬ್ದಕೋಶಕ್ಕೆ ಈ ಮೇಧಾವಿಯಿಂದಾಗಿರುವ ಉಪಕಾರ ಬಹಳ. ಸಂಸ್ಕøತದಲ್ಲೂ ಇವರದು ಆಳವಾದ ತಿಳಿವಳಿಕೆ. ಇಂಗ್ಲಿಷ್ ಸಾಹಿತ್ಯದ ಪರಿಚಯವೂ ಇವರಿಗೆ ಸಾಕಷ್ಟು ಇತ್ತು. ತಮ್ಮ ಮನೆತನದ ವಿದ್ಯೆಯಾದ ಆಯುರ್ವೇದದಲ್ಲೂ ಇವರು ಪ್ರವೀಣರು  ಇವರು ತುಂಬ ಸಾತ್ತ್ವಿಕರು, ತತ್ತ್ವನಿಷ್ಠರು.  ಕಂದ ವೃತ್ತಗಳನ್ನು ರಚಿಸುವುದರಲ್ಲಿ ಇವರ ಲೇಖನಿ ಉದಾರವಾದದ್ದು. ಯಮುನಾಚಾರ್ಯರ ಸ್ತೋತ್ರ ರತ್ನ, ಕುಲಶೇಖರ ಆಳ್ವಾರರ ಮುಕುಂದ ಮಾಲೆ, ವೇದಾಂತ ದೇಶಿಕಂ ಅಚ್ಯುತ ಶತಕ- ಇವನ್ನು ಪದ್ಯದಲ್ಲಿ ಭಾಷಾಂತರಿಸಿದ್ದಾರೆ. ಪ್ರಣಯತರಂಗಿಣಿ ಎಂಬ ಕಂದವೃತ್ತಗಳ ಪ್ರಬಂಧ ಇವರ ಸ್ವಂತಕೃತಿ. ಇವರು ವಿದ್ವತ್‍ಪೂರ್ಣವಾದ ಹಲವಾರು ಪ್ರೌಢಪ್ರಬಂಧಗಳನ್ನು ಬರೆದಿದ್ದಾರೆ. ಸಂಸ್ಕøತ ಭಾಗವತ ಪುರಾಣವನ್ನು ಬಹ ಹೃದಯಂಗಮವಾಗಿ ವ್ಯಾಖ್ಯಾನಿಸಿ ಇವರು ಪಂಡಿತಪಾಮರರನ್ನು ರಂಜಿಸಿದರಲ್ಲದೆ, ಕುಮಾರವ್ಯಾಸ ಭಾರತ ಮತ್ತು ಜೈಮಿನಿ ಭಾರತಗಳನ್ನು ಗಮಕಿಗಳಿಂದ ಓದಿಸಿ ತಾವು ಅರ್ಥೈಸುತ್ತ ಲೋಕಪ್ರಿಯರಾಗಿದ್ದರು. ಇವರು ತುಂಬ ಸ್ನೇಹಪರರಲ್ಲದೆ e್ಞÁನ ಭಕ್ತಿ ವೈರಾಗ್ಯಗಳ ಜೊತೆಗೆ ರಸಿಕತೆಯನ್ನೂ ತಮ್ಮ ಸಾತ್ತ್ವಿಕ ವ್ಯಕ್ತಿತ್ವದಲ್ಲಿ ಪಡೆದುಕೊಂಡಿದ್ದ ಅಪರೂಪದ ವ್ಯಕ್ತಿ. 
(ಪಿ.ಟಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ